Statutory warning : Readers' discretion advised!
Contains no harmful additives; naturally clicked ideas and incidents with added sugar and Indian masalas..!!No offence intended! (Dirty souls and SiDakmoothis can consider the harm ;) and kindly keep us informed so that we can give the same a double dose!!!)

Tuesday, October 30, 2007

ನಾಯಿಯಾದ ಸಾಯಿ!!!!

ಅವನ ಹೆಸರು ಸಾಯಿಕುಮಾರ್... ಮೋರಿಯಪ್ಪ ಸಾಯಿಕುಮಾರ್...
ಬೆಂಗಳೂರಿನ ಕೆಂಗೇರಿ ಮೋರಿಯ ಬದಿಯಲ್ಲಿದ್ದ ಒಂದು ಬೀದಿಯಲ್ಲಿ ವಾಸವಾಗಿದ್ದ.. ಮೋರಿಗೆ ಕಳೆ ಹೆಚ್ಚೋ ಇಲ್ಲಾ ಆತನ ವಂಶಕ್ಕೆ ಮೋರಿಯಿಂದ ಕಳೆಯೋ ಎಂಬಂತೆ!!
ಒಂದು ಹೆಂಡತಿ, ನಾಯಿಯೊಂದಿಗೆ ಇದ್ದ... ಆತ ನಾಯಿಯನ್ನು ಸಾಕಿದ್ದುದ್ದು ಹೆಂಡತಿ ಜೊತೆ ಜಗಳವಾದಾಗಲೆಲ್ಲ ನಾಯಿಗೆ ವಾಚಾಮಗೋಚರವಾಗಿ ಬಯ್ಯಲು... ಬಾರಿಸಲು..ಪಾಪ ಮೂಕ ಪ್ರಾಣಿ ತಾನೇ ಏನು ಮಾಡಿಯಾತು..ತೆಪ್ಪಗೆ ಯಜಮಾನನ ಏಟುಗಳನ್ನ ಸಹಿಸಿಕೊಂಡಿತ್ತು.... -- "man! Every dog has his day"! ....


ಒಂದು ದಿನ ಹೀಗೆ ಎಂದಿನಂತೆ ಗಂಡ ಹೆಂಡಿರ ಜಗಳ ತಾರಕ್ಕಕ್ಕೇರಿತ್ತು.. ನಾಯಿ ಒಂದು ಅಡಗಿಕುಳಿತಿತ್ತು...ಒಳಗೆ ಪಾತ್ರೆಗಳ ಶಬ್ದ..ಬೈಗುಳಗಳ ಸುರಿಮಳೆ ನಡೆಯುತ್ತಲೇ ಇತ್ತು...

ಢಂ ಢಂ ಢಮಾರ್‍................ ಈ ಸದ್ದಿಗೆ ಅಲ್ಲೇ ಮೂಲೆಯಲ್ಲಿ ಕುಳಿತಿದ್ದ ನಾಯಿ ಬೆಚ್ಚಿ ಸ್ವಲ್ಪ ಹಿಂದಕ್ಕೆ ಸರಿಯಿತು!

ಇದ್ದಕ್ಕಿದ್ದಂತೆ ಹೊರಬಂದ ಸಾಯಿ ಚಡಪಡಿಸತೊಡಗಿದ...ಅದೆ ಸಮಯಕ್ಕೆ ನಾಯಿಗೆ ಏನನ್ನಿಸಿತೋ ಏನೋ ಇವನನ್ನು ನೋಡಿ ಒಮ್ಮೆ ಬೊಗಳಿತು... ಅಷ್ಟಕ್ಕೆ ಕ್ರುದ್ದನಾದ ಸಾಯಿ ಒಳಗೆ ಹೋಗಿ ಚಾಕುವನ್ನು ಹಿಡಿದು ತಂದ..(ಆತನ ಹೆಂಡತಿ ಇವನ ಮೇಲೆ ಪ್ರಯೋಗ ಮಾಡಿದ್ದಳಲ್ಲ)....ತಂದವನೇ ಒಮ್ಮೆಲೆ ನಾಯಿ ಬಾಲವನ್ನು ಕಚ ಕಚನೆ ಕತ್ತರಿಸಿಬಿಟ್ಟ....ನಾಯಿಯ ಅರಿವಿಗೆ ಏನು ನಡೆಯುತ್ತಿದೆ ಎಂದು ತಿಳಿಯುವುದರೊಳಗೆ ನಡೆದು ಹೋಗಿಬಿಟ್ಟಿತ್ತು..ನಾಯಿ ಬಾಲ ತುಂಡರಿಸಿಹೋಗಿತ್ತು..!!
ಸಾಯಿಗೆ ವಿಚಿತ್ರವಾದ ಖುಶಿಯಾಗತೊಡಗಿತು... ಅವನು ಮೂಲತಹ ತನ್ನ ಹೆಂಡತಿಯ ಜಡೆಯನ್ನು ಕತ್ತಿರಸಬೇಕೆಂದಿದ್ದ.. ಆಕೆಯ ಕೋಪವನ್ನು ನಾಯಿ ಬಾಲದ ಮೇಲೆ ತೋರಿಸಿದ್ದ..ನಾಯಿಗೆ ಅಲ್ಲಾಡಿಸಲು ಬಾಲವೇ ಇರಲ್ಲಿಲ್ಲ..ತುಂಡರಿಸಿಹೋಗಿತ್ತು....ಉಹೂ,... ಅದು ಜೋರಾಗಿ ಅಳಲು ಶುರು ಮಾಡಿತು... ಚೈನಿಗೆ ಕಟ್ಟಿದ್ದರೂ ಎಳೆದಾಡತೊಡಗಿತು...ಅಷ್ಟು ವರ್ಷದಿಂದ ಪ್ರೀತಿಯಿಂದ ಅಲ್ಲಾಡಿಸ್ಕೊಂಡು ಬಂದಿದ್ದ ಬಾಲ ತುಂಡರಿಸಿ ಹೋಗಿತ್ತು..ಅದಕ್ಕೆ ನಂಬಲು ಸಾಧ್ಯವೇ ಇರಲ್ಲಿಲ್ಲ....ಯಜಮಾನನ ಮೇಲೆ ಕೋಪ ಬಂದು ವಿಚಿತ್ರವಾಗಿ ಬೊಗಳತೊಡಗಿತು...

ಇದ್ದಕ್ಕಿದಂತೆ ಜೋರಾಗಿ ಗಾಳಿ ಬೀಸತೊಡಗಿತು...... ಮರದ ಎಲೆಗಳು ಗಾಳಿಗೆ ಆ ಕಡೆ ಈ ಕಡೆ ತಾರಡುತ್ತಿದ್ದವು..
-------- fshhhhhhhhhpsshhhh shhhhshhhhhhh -------------
ನೋಡನೋಡುತ್ತಿದ್ದಂತೆ ಶ್ವಾನದೇವ ಪ್ರತ್ಯಕ್ಷನಾದ.. ಶುಭ್ರಬಿಳೀಬಣ್ಣಮಯವಾಗಿದ್ದ ಶ್ವಾನದೇವನ ಕಣ್ಣುಗಳು ಮಾತ್ರ ಕೆಂಪಾಗಿದ್ದವು...ನಾಯಿಯ ಬಾಲ ತುಂಡರಿಸುದುದನ್ನು ಕಂಡು ಕೆಂಡಾಮಂಡಲವಾಗಿದ್ದ..
ಅಲ್ಲೆ ನಿಂತಿದ್ದ ಸಾಯಿಯೆಡೆಗೆ ತಿರುಗಿ.."ಎಲೈ ಧೂರ್ತನೆ...ಏನೆಂದು ತಿಳಿದಿರುವಿ ನಾಯಿಗಳೆಂದರೆ...ನಾನು ಗಮನಿಸುತ್ತಲೇ ಇದ್ದೇನೆ...ಈ ನಾಯಿಗೆ ಬಹಳ ತೊಂದರೆಯನ್ನುಂಟುಮಾಡುತ್ತಿದ್ದೀಯ...ಇಂದು ನಿನ್ನ ಪಾಪಮೂಟೆ ತುಂಬಿದೆ... ಪಾಪಕೂಪದ ಪರಮಾವಧಿ" ಸಾಯಿ ಸುಮ್ಮನೆ ಬಿಟ್ಟ ಕಣ್ಣು ಬಿಟ್ಟಂತೆ ಶ್ವಾನದೇವನನ್ನೇ ನೋಡುತ್ತಿದ್ದ...ಶ್ವಾನದೇವ ತನ್ನ ಮಾತುಗಳನ್ನು ಮುಂದುವರೆಸಿ.. "ಇದೋ ನಿನಗೆ ನಾನು ಶಾಪವೀಯುತ್ತಿದ್ದೇನೆ...ನೀನು ಇಂದಿನಿಂದಲೇ ಕಂತ್ರಿನಾಯಿಯಾಗು.. ಪಡಬಾರದ ಕಷ್ಟಗಳನ್ನ ಪಡು.."

ಅಷ್ಟರಲ್ಲಿ ಸಾಯಿ ಶ್ವಾನದೇವನ ಕಾಲು ಹಿಡಿದು "ಮನ್ನಿಸು ಮಹಾಪ್ರಭೋ...ಈ ಶಾಪಕ್ಕೆ ಉಪಶ್ಯಾಪವನ್ನು ಹೇಳುವವನಂತಾಗು..ಏನೋ ಅರಿಯದೆ ಮಾಡಿದ ತಪ್ಪಿಗೆ ಇಂತಹ ಘೋರ ಶಿಕ್ಷೆಯೇ...... " ಹಿಡಿದ ಕಾಲನ್ನು ಸಡಿಸಲಿಲ್ಲ ಸಾಯಿ.. ತುಸು ಮೆಲ್ಲಗಾದ ಶ್ವಾನದೇವನು "ಸರಿ ನೀನು ಮಾಡಿದ ತಪ್ಪಿಗೆ ನಾಯಿಯಾಗಲೇಬೇಕು.... ನೀನು ಕಂತ್ರಿ ನಾಯಿಯಾಗಿ ಬೆಂಗಳೂರಿನ ಬೀದಿ ಬೀದಿಗಳನ್ನು ಅಲೆಯುವವನಂತಾಗು...ಹಾಗೂ ಈ ನಾಯಿಯ ತುಂಡರಿಸಿದ ಬಾಲ ಮತ್ತೆ ಬೆಳೆಯುವವರೆಗೂ ನೀನು ನಾಯಿಯಾಗೆ ಇರುತ್ತೀಯ."

ಸಾಯಿಯು ಕೇಳಿದ..."ಏಷ್ಟು ದಿನ ಹಿಡಿಯುತ್ತದೆ ಮಹಾಪ್ರಭೋ..ನಾಯಿ ಬಾಲ ಮತ್ತೆ ಬೆಳೆಯಲು? "

"ಒಂದು ತಿಂಗಳು ಕಾದುನೋಡು...." ಎಂದು ಉತ್ತರಿಸಿದ...

"ಅಲ್ಲಿನವರೆಗು ನಾನು ನಾಯಿ ಯಂತೆ ಬೀದಿ ಬೀದಿ ಅಲೆಯಬೇಕಾ.....??" ಎಂದು ದಿಕ್ಕಾಪಾಲಾದವರಂತೆ ಕೇಳಿದ!

"Yesssss ನೀನು ನಾಯಿಪಾಡನ್ನು ಅನುಭವಿಸಲೇಬೇಕು.... ನಾಯಿಯಾಗಿ ಬೀದಿ ಬೀದಿಯನ್ನು ಸುತ್ತು..ಆಗ ನಿನಗೆ ಅರಿವಾಅಗುತ್ತದೆ... ನಾಯಿಗಳ ಕಷ್ಟ...."

"ಸರಿ....ಒಂದು ತಿಂಗಳ ಒಳಗೆ ಬಾಲ ಬೆಳೆಯುತ್ತದೆ ಅಲ್ಲವೆ..." ಎಂದು ಗದ್ಗತಿತನಾಗಿ ಕೇಳುತ್ತಿದ್ದ ಸಾಯಿಗೆ ಕಾಣಿಸಿದ್ದು
psssssssssshpshhhh ಅಗೋಚರವಾಗುತ್ತಿದ್ದ ಶ್ವಾನದೇವ..!!!!!

ಈಗ ನಾಯಿಯ ರೂಪ ಪಡೆದ ಸಾಯಿ ಬುಳ ಬುಳನೆ ಅಳತೊಡಗಿದ್ದ...

ಇದೆಲ್ಲಾ ವಿಷಯಗಳು ಆತನ ಹೆಂಡತಿಗೆ ತಿಳಿಯಿತು... "ಹೋಗಲಿ .. ಒಂದು ತಿಂಗಳು ಇವನ ಕಾಟವಿರುವುದಿಲ್ಲ... ಇವರಿಗಿಂತ ಈ ನಾಯಿಯೇ ವಾಸಿ..." ಎಂದು ಬಾಗಿಲು ಬಡಿದು ಒಳಗೆ ಹೋದಳು...

ನಾಯಿಯಾಗಿ ಪರಿವರ್ತಿತನಗಿದ್ದ ಸಾಯಿ...ಬೂದುಬಣ್ಣವನ್ನು ಹೊಂದಿದ್ದ....ಮೈಮೇಲೆಲ್ಲ ಪಟ್ಟೆಗಳು... ಥೇಟ್ ಕಂತ್ರಿನಾಯಿಯಿದ್ದಂತೆ ಆಗಿತ್ತು...ಅಲ್ಲಲ್ಲಿ ಕಜ್ಜಿಯದಂತೆ ಕಂಡುಬರುವ ಗುರುತುಗಳು....
ಏನೋ ಮಾತನಾಡಲು ಹೋದ...ಬೌ ಬೌ ಶಬ್ಧ ಬಂದಿತು......!!!!
ಬಾಲ ತುಂಡರಿಸಿಕೊಂಡ ನಾಯಿ ಸಾಯಿಯನ್ನು ನೋಡಿ ಹಲ್ಲುಕಿರಿಯುತ್ತಿತ್ತು.... ಶ್ವಾನದೇವ ಅಲ್ಲಿಂದ ಮಾಯವಾಗಿದ್ದ....
ಭಾರವಾದ ಹೃದಯದಿಂದ, ನಿಧಾನವಾದ ಹೆಜ್ಜೆಗಳನ್ನಿಡುತ್ತ...ಹೊರಗೆ ಬಂದ ನಾಯಿಯಾದ ಸಾಯಿ... ಒಂದು ತಿಂಗಳು ಈ ಮಹಾನಗರದಲ್ಲಿ ಹೇಗೆ ಕಳೆಯುವುದು ಎಂದೇ ಅದರ ಚಿಂತೆಯಾಗಿತ್ತು......

ಮೊದಲ ದಿನ ಅಲ್ಲಲ್ಲೇ ಅಡ್ಡಾಡಿಕೊಂಡಿದ್ದ ನಾಯಿ ಮೊದಲ ದಿನದ ಹಸಿವನ್ನು ಹೇಗೋ ತಡೆದುಕೊಂಡಿತು... ಅಲ್ಲಲ್ಲಿ ಸಿಕ್ಕ ಚೂರು ಪಾರು ತಿಂಡಿಯನ್ನು ತಿನ್ನುತ್ತಿರಲಿಲ್ಲ... ಸ್ವಾಭಿಮಾನ ಅದಕ್ಕೆ....!
ದಿನ ಪೂರ್ತಿ ಒಂದೇ ಕಡೆ ಇರದೆ ಸುಮ್ಮನೆ ಒಡಾಡುತ್ತಿತ್ತು... ಅಲ್ಲೇ ಅದೇ ಬಡಾವಣೆಯಲ್ಲಿ ಒಂದು ಮರದ ಕೆಳಗೆ ಮಲಗಿತ್ತು ಆ ರಾತ್ರಿ.... ಸುಮ್ಮನೆ ಪರಿತಪಿಸುತಿತ್ತು ಅನ್ಯಾಯವಾಗಿ ಬಾಲ ಕತ್ತರಿಸಿದೆನಲ್ಲ ಎಂದು...ಸ್ವಲ್ಪ ಹೊತ್ತಿನಲ್ಲಿ ಎದ್ದು ಮನೆ ಕಡೆಗೆ ಹೋಗಿ ನೋಡಿತು... ಅಕಸ್ಮಾತ್ ಬಾಲದ ಬೆಳವಣಿಗೆ ಏನಾದ್ರೂ ಆಗಿದ್ಯಾ ಅಂತಾ..
ದೂರದಿಂದ ಕ್ಷೀಣವಾದ ಬೆಳಕಿನಡಿಯಲ್ಲಿ ಬಾಲದ ಬೆಳವಣಿಗೆ ಏನೊಂದು ಕಾಣಿಸಲಿಲ್ಲ.... ತೆಪ್ಪಗೆ ಮರಳಿ ಬಂದು ಮಲಗಿತು...

ಬೆಳಗೆದ್ದ ಕೂಡಲೇ ಹೊಟ್ಟೆ ಚುರಗುಡುತ್ತಿತ್ತು ನಾಯಿಯಾದ ಸಾಯಿಗೆ... ಏನು ಮಾಡುವುದು ದಿಕ್ಕು ತೋಚಲಿಲ್ಲ...ಅಲ್ಲಿದ್ದ ಹಾಳು ಮೂಳು ತಿನ್ನಲು ಮನಸಾಗಲಿಲ್ಲ...ಕೆಲವರ ಮನೆ ಮುಂದೆ ಹಾಕಿದ್ದ ಅನ್ನವನ್ನು ಮೂಸಿ ಹಿಂದೆ ಸರಿದಿತ್ತು.. ಛೆ ಇದನ್ನ ತಿನ್ನೋ ಲೆವೆಲ್ಲಾ ನನಗೆ ಎಂದುಕೊಳ್ಳುತ್ತಾ ನೀರನ್ನು ಕುಡಿದು ಆ ದಿನವನ್ನು ಹಾಗೆ ನೂಕಿತು... ಗೊತ್ತು ಗುರಿಯಿಲ್ಲದೆ ಬೀದಿ ಬೀದಿ ಅಲೆದಾಡುತ್ತಿತ್ತು...

ದಿನಗಳು ಕಳೆದಂತೆ ಹೀಗೆ ಇದ್ದರೆ ತನ್ನ ಪ್ರಾಣ ಹಾರಿ ಹೋಗುವುದೆಂದು ಅರಿವಾಗಿ, ಒಲ್ಲದ ಮನಸಿನಿಂದ ಕೆಟ್ಟ, ಹಳಸಿದ ಅನ್ನವನ್ನು ತಿನ್ನಲು ನಿರ್ಧರಿಸಿತು.. ಹುಡುಕಾಡಿದರೂ ಎಲ್ಲೂ ಸಿಗಲಿಲ್ಲ..ಆಗಷ್ಟೆ ಮನೆಯ ಯಜಮಾನಿ ತಂದು ಒಂದಷ್ಟು ಹಾಕಿದೊಡನೆಯೆ ಅತ್ತ ಧಾವಿಸಿತು..ಇನ್ನೇನು ಅನ್ನಕ್ಕೆ ಬಾಯಿ ಇಡಬೇಕು ಒಂದಷ್ಟು ಕಂತ್ರಿ ನಾಯಿಗಳು ಇದರ ಮೇಲೆ ಎಗರಿ ಬಿದ್ದವು.... "Ohhhhh my GodDog!!" ಎಂದು ಪಕ್ಕ ಸರಿಯಿತು...
ನೋಡನೋಡುತ್ತಿದಂತೆ ತಿಂದು ಮುಗಿಸಿದವು ಅಲ್ಲಿದ್ದ ನಾಲ್ಕು ನಾಯಿಗಳು..ಅದರಲ್ಲಿ ಒಂದು ಘೋರವಾದ ಕರೀ ನಾಯಿ, ಕೆಂಪು ಕಣ್ಣುಗಳಿದ್ದ ನಾಯಿ ಇದರ ಬಳಿ ಬಂದು "ಇದು ನಮ್ಮ ಜಾಗ, ಯಾವನೋ ನೀನು, ಹೊಸಬನಂತೆ ಕಾಣುತ್ತೀಯ... ಬಂದು ಬಾಯಿ ಹಾಕುತ್ತೀಯ.. ಎದ್ ಹೋಗೋಲೋ.. ಜಾಗ ಖಾಲಿ ಮಾಡು... ಬೇರೆ ಕಡೆ ನೋಡ್ಕೋ ಹೋಗ್" ಎಂದು ಗುಟುರು ಹಾಕಿತು..
ಅದರ ಬೊಗಳುವಿಕೆಗೆ ಬೆಚ್ಚಿ ಬಿದ್ದು ಅಲ್ಲಿಂದ ಪರಾರಿಯಾಯಿತು.. ಮಧ್ಯಾಹ್ನದವರೆಗು ಎಲ್ಲೂ ತುತ್ತು ಅನ್ನವೂ ಸಹ ದೊರಕಲಿಲ್ಲ....
ಅಲ್ಲೆಲ್ಲೋ ಬೇಕರಿಯ ಮುಂದೆ ಚೂರು ಪಾರು ಬಿದ್ದಿದ್ದ ಬಿಸ್ಕತ್ ತಿನ್ನಲು ತೊಡಗಿತು... ತಿನ್ನುವ ಮುಂಚೆ ಸುತ್ತಲೂ ಒಮ್ಮೆ ನೋಡಿ ಅದನ್ನು ತೆಗೆದು ಕೊಂಡು ಅಲ್ಲಿಂದ ಯಾರಿಗೂ ಕಾಣಿಸದ ಜಾಗಕ್ಕೆ ಹೋಗಿ ತಿನ್ನತೊಡಗಿತು.... ಏನೋ ಸಮಾಧಾನ ಅದಕ್ಕೆ.... ತಿಂದು ಮುಗಿಸುವ ವೇಳೆಗೆ ಗಳ ಗಳನೆ ಅತ್ತುಬಿಟ್ಟಿತು.... ಅಷ್ಟು ದಿನಗಳೂ ದಿನವೂ ಪ್ರತಿಕ್ಷಣವೂ ಪರಿತಪಿಸಿತ್ತು ಅನ್ಯಾಯವಾಗಿ ಬಾಲ ಕತ್ತರಿಸಿದನಲ್ಲ ಎಂದು..

ದಿನವೂ ಬೀದಿಯಲ್ಲಿ ಏಗಿ ಏಗಿ ಒಂದು ನೆಲೆ ಬೇಕೆನಿಸಿತ್ತು... ಆದರೆಲ್ಲೂ ದೊರೆಯುತ್ತಿರಲಿಲ್ಲ..
ಒಮ್ಮೆ ದೊಡ್ಡವರ ಬಳಿ ಹೋಗಿ ಬೌ ಬೌ ಎಂದು ಬೊಗಳಿತ್ತು....ಏನಾದರೂ ಕೊಡುವರೇನೊ ಎಂದು..ಉಹೂ, ಕಲ್ಲು ತೆಗೆದು ಅಟ್ಟಾಡಿಸಿದ್ದರು..ಅಂದಿನಿಂದ ದೊಡ್ಡವರ ತಂಟೆಗೆ ಹೋಗಲೇಇಲ್ಲ...ಹೋಗಲಿ ಕಿರಿಯರ ಬಳಿ ಬಿಸ್ಕತ್, ಬನ್ನು ಇತ್ಯಾದಿಗಳಿರುತ್ತದೆಂದು ಕಿಡ್ನಿ ಉಪಯೋಗಿಸಿ ಒಂದು ಸಂಜೆ ಅಂಗಡಿ ಮುಂದೆ ಜಮಾಯಿಸಿದ್ದ ಮಕ್ಕಳ ಕಡೆಗೆ ಬೊಗಳಿತು...ಅದೆಲ್ಲಿದ್ದರೋ , ಬೀದಿ ನಾಯಿಗಳ ಕಾಟದಿಂದ ರೋಸಿ ಹೋಗಿದ್ದ ಜನ ಮೈ ಮೇಲೆ ದೆವ್ವ ಬಂದವರಂತೆ ಕೈಗೆ ಸಿಕ್ಕಿದ್ದನ್ನು ತೆಗೆದು ಬಾರಿಸತೊಡಗಿದರು, ಅಟ್ಟಡಿಸಿ ಬಾರಿಸಿದರು....!!
ಆ ಗಾಯಗಳು ಸುಧಾರಿಸಲು ಬಹಳ ದಿನಗಳೇ ಹಿಡಿದವು.... ಕೈಕಾಲಿಗೆ ಪೆಟ್ಟಾದ ಸಮಯದಲ್ಲಿ ತೊಟ್ಟಿಯಲ್ಲಿ ಸಿಕ್ಕಿದ ಅಳಿದುಳಿದುದನ್ನು ತಿಂದು ಜೀವ ಉಳಿಸಿಕೊಂಡಿತ್ತು... ಆಗ ಅದಕ್ಕೆ "ಚಿನ್ನಾರಿಮುತ್ತಾ" ಚಿತ್ರದ ಈ ಹಾಡು ರೀಲ್ ಹೋಡೀತಿತ್ತು....." ಏಷ್ಟೊಂದ್ ಜನ ಇಲ್ಲಿ ಯಾರು ನನ್ನೋರು...ಏಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ..."

ಮತ್ತೊಮ್ಮೆ ಈ ಹಾಡು ನೆನೆದು ಕುಯ್ ಗುಡುತ್ತಿತ್ತು. "ಅನಾಥ ನಾಯಿಯಾದೆ ನಾನು ಅಪ್ಪನು ಅಮ್ಮನು ಇಲ್ಲ... ಭಿಕಾರಿ ಕಂತ್ರಿಯಾದೆ ನಾನು ಅಣ್ಣನು ತಮ್ಮನೂ ಇಲ್ಲ.. ಹುಟ್ಟೋ ನಾಯಿಗೆಲ್ಲ ತುಂಡು ರೊಟ್ಟಿಯಂತೆ... ನನಗೆ ಅದೂ ಕೂಡ ಇಲ್ಲವಂತೆ..."
ಎಂದು ಒಂದೇ ಸಮನೆ ಘೀಳಿಡುತ್ತಿತ್ತು...ಅದರ ನಗರ ರೋದನ ಅರಿತವರು ಯಾರು ತಾನೆ ಇದ್ದರು..ಇಷ್ಟೆಲ್ಲದರ ನಡುವೆಯು ದಿನವೂ ಮನೆಗೆ ಭೇಟಿ ಕೊಡುವುದು ನಾಯಿ ಬಾಲ ಬೆಳೆದಿದೆಯೇ ಎಂದು ನೋಡುವುದು...ಹ್ಯಾಪ್ ಮೋರೆ ಹಾಕಿಒಂದು ವಾಪಸಾಗುವುದು. ಒಮ್ಮೆ ಹೀಗೆ ಬಂದಾಗ ಸಿಕ್ಕಾಪಟ್ಟೆ tempt ಆಗಿ "ನಿನ್ನ ದರಿದ್ರವಾದ ಬಾಲ ಬೆಳೆಯಲು ಇನ್ನೆಷ್ಟು ದಿನ ಬೇಕು??... ನನಗೆ ಸಾಕಗಿ ಹೋಗಿದೆ..." ಎಂದು ಕೇಳಿತು ಗೇಟಿನ ಆಚೆ ಬದಿ ನಿಂತು..
"ಎಷ್ಟೋ ಬೆಳೆದಿದೆ ನಿನಗ್ಯಾಕೆ..ಹೇಳಲ್ಲ ಕಳ್ಚಿಕೋ.. ನೋಡು ಕಾಲ ಚಕ್ರ.. wheel wheel.. ಹೆಂಗೆ..." ಎಂದು ಹೇಳಿ ಕುಣಿಯತೊಡಗಿತು..

ಇದು ತಲೆ ತಗ್ಗಿಸಿ ಅಲ್ಲಿಂದ ಕಾಲ್ತೆಗೆದಿತ್ತು..

ದಿನಗಳು ಹತ್ತಿರವಾಗಿತ್ತು...ನಾಯಿ ಪಾಡು ನಾಯಿಗೇ ಸಾಕಾಗಿತ್ತು.... ಹಳಸಿದ ಅನ್ನ, ಗಟ್ಟಿಯಾದ ರೊಟ್ಟಿ, ತೊಟ್ಟಿಯಲ್ಲಿ ಆಯ್ದು ತಿನ್ನುವುದು ತಕ್ಕ ಮಟ್ಟಿಗೆ ರೂಢಿ ಕೂಡ ಆಗಿಬಿಟ್ಟಿತ್ತು... ಸಾಕಪ್ಪಾ ಇಂತಹ ಜೀವನ...


ಒಂದು ಮನೆಯನ್ನು ಗೊತ್ತು ಮಾಡಿಕೊಂದು ಅಲ್ಲೆ ಬಿದ್ದಿರುತ್ತಿತು...ಅವರು ಹಾಕಿದರೆ ಹಾಕಿದರು ಇಲ್ಲವೆಂದರೆ ಇಲ್ಲ.... ಹಾಗೆ ತಿಂದು ತನ್ನ ಪ್ರಾಣವನ್ನು ಉಳಿಸಿಕೊಂಡಿತ್ತು..... ತಿಂಗಳು ಮುಗಿಯುವ ವೇಳೆಗೆ ಇನ್ನಿಲ್ಲದ ಖುಶಿಯಲ್ಲಿ ಮನೆಯೆಡೆಗೆ ಧಾವಿಸಿತು....ಆಗ ಈ ಹಾಡನ್ನು ಗುನುಗುತ್ತ ಬರುತ್ತಿತ್ತು... "ಎಂದು ನಿನ್ನ ನೋಡುವೆ....ಎಂದು ನಿನ್ನ ಸೇರುವೆ..." ಇದನ್ನ ಹಾಡಿದ್ದು ಬಾಲ ಕತ್ತರಿಸಿದ ನಾಯಿಯ ಬಗ್ಗೆಯೋ ಅಥವಾ ತನ್ನ ಹೆಂಡತಿಯ ಬಗ್ಗೆಯೋ ಗೊತ್ತಾಗಲಿಲ್ಲ...

ಬಂದು ನೋಡಿದರೆ ಮನೆಗೆ ಬಾಗಿಲು ಹಾಕಿಕೊಂದು ಹೆಂಡತಿ ಎತ್ತಲಿಗೋ ಹೋಗಿದ್ದಳು... ಛೆ ನಾನು ಬರುವೆನೆಂದು ಆರತಿ ಸ್ವಾಗತ ಬೇಡ, ಅಟ್ಲೀಸ್ಟ್ ಮನೆಯಲ್ಲಾದರೂ ಇರಬಾರದೇ! ಅದೂ ಇಲ್ಲ.. ಎಲ್ಲಿ ಹಾಳಾಗಿ ಹೋಗಿದ್ದಾಳೋ...ಇರಲಿ ನೋಡುವೆ.... ಮನೆಯಲ್ಲಿದ್ದ ನಾಯಿಯೆಡೆಗೆ ನೋಡಿತು..
ಮತ್ತೊಂದು ಆಘಾತ ಕಾದಿತ್ತು..
ನಾಯಿಯಾದ ಸಾಯಿಗೆ...ಬಾಲ ಎಳ್ಳಷ್ಟು ಬೆಳೆದಿಲ್ಲ.... ಕೇಳಿತು.."ಏನಯ್ಯ ಒಂಚೂರು ಬೆಳೆದಿಲ್ಲಾ!!!!!!!!!!!!!!!!!
"ಏನೋ ಇದೂ???????!! ಒಂಚೂರು ಬೆಳೆದಿಲ್ಲ..ಮತ್ತೆ ತುಂಡರಿಸಿಕೊಂಡೆಯೋ ಹೇಗೆ???!!!!..
ಯಾವನ್ ಹೀಗೆ ಇರುತ್ತಾನೆ???..... 'ನಾಯಿ ಪಾಡು' ಅಂತಾರಲ್ಲಾ ಹಾಗೆ!! ಈಗ ಅರ್ಥ ಆಗ್ತಿದೆ!
ಏನು ನಿನ್ನ ರಗಳೆ..ನಿನ್ನ ಪಾದಕ್ಕೆ ದೊಡ್ಡ ನಮಸ್ಕಾರ... ನಮೋ ನಾಯಿನಾಥ.. ನಮೋ ಶ್ವಾನಭೂತ....
ಏಲ್ಲೋ ನಿನ್ನ ಶ್ವಾನದೇವ??.. ನನ್ನನ್ನು ಎಂದು ಮಾಡುತ್ತಾನೆ ಮಾನವನಾಗಿ??..."

ಬಾಲ ತುಂಡರಿಸಿಕೊಂಡಿದ್ದ ನಾಯಿ ಜೋರಾಗಿ ನಗುತ್ತ " ಆಹಾ!!! ಅದೇನು ಮಾನವನಾಗಿದ್ದೀಯೊ ಏನೋ.. ಥೂ ನಿನ್ನ ಜನ್ಮಕ್ಕೆ.... ತಲೆ ಬೇಡ್ವಾ... ನಾಯಿಗೆ ಒಮ್ಮೆ ತುಂಡರಿಸಿದ ಬಾಲ ಮತ್ತೆಂದಿಗೂ ಬೆಳೆಯುವುದಿಲ್ಲ.... ನೀನು ಮತ್ತೆ ಸಾಯಿಯಾಗುವುದಿಲ್ಲ.... ನಾಯಿಯಾಗೆ ಸಾಯ್ತೀಯ..." ಎಂದು ಮತ್ತೊಮ್ಮೆ ಗಹಗಹಿಸಿ ನಗತೊಡಗಿತು.

ಸಾಯಿಗೆ ಸಾಯೋ ತರ ಆಗಿ ತಲೆ ತಿರುಗತೊಡಗಿತು...

ನಾಯಿಯಾದ ಸಾಯಿಗೆ ತನ್ನ ತಲೆ ಎಲ್ಲಿದೆಯೋ ಎಂದೇ ಗೊತ್ತಾಗಲಿಲ್ಲ... ನಕ್ಷತ್ರಗಳು ಕಾಣತೊಡಗಿದವು..

ಆ ನಕ್ಷತ್ರಗಳನ್ನು ಸೀಳಿ ಎದುರಿಗೆ ಬಂದಳು ಟಿಮ್ಮಿ.. ಅವಳ ಕಂಗಳು ನಕ್ಷತ್ರಗಳಿಗಿಂತಲೂ ಸುಂದರವಾಗಿದ್ದವು..... ಫಳ ಫಳನೆ ಮಿನುಗುತ್ತಿತ್ತು...
ಈಗಾಗಲೆ ಜೊಲ್ಲು ಸುರಿಸುತ್ತಿದ್ದ ಬಾಲವಿಲ್ಲದ ಹ್ಯಾಂಡ್ಸಮ್ ನಾಯಿಗೆ ಜೊಲ್ಲು ಜಾಸ್ತಿಯಾಯಿತು... ಅದರ ಪಕ್ಕ ನಿಂತು "ನೋಡು ನಮ್ಮ ಜೋಡಿ..ನಿಮ್ಮ ತರಹ ಅಲ್ಲ.. ಟಿಮ್ಮಿ ನನ್ನ ಬಾಲ ಕಟ್ ಆಗಿದೆಯೆಂಬುದ್ದನ್ನೂ ಲೆಕ್ಕಿಸದೇ ಪ್ರೀತಿ ಮಾಡುತ್ತಾಳೆ...
ಸರಿ ಮ್ಯಾನ್ ನಂಗೆ ಲೇಟ್ ಆಯ್ತು... ಟಾಟಾ.."

"Come on Timmy.. Let's Go.."

ದಂಗಾದ ಸಾಯಿ ಅವರನ್ನು ತಡೆದು ಕೇಳಿದ... "ಲೋ ಏಲ್ಲೊ ಹೊರಟೆ...?????"

ಜೋಡಿಯಾದ ನಾಯಿಗಳು ಒಮ್ಮೆಲೆ ಉತ್ತರಿಸಿದವು... "honeymoon"..

"ಮತ್ತೆ ತಿರುಗಿಯೂ ಸಹ ನೋಡುವುದಿಲ್ಲ ಈ ಮನೆ ಕಡೆ...ಗುಡ್ ಬೈ...." ಎಂದು ಹೆಳಿ ಟಿಮ್ಮಿಯ ಹೆಗಲಮೇಲೆ ಕೈಹಾಕಿಕೊಂಡು ಹೊರಟೇಬಿಟ್ಟವು....

ಇದುವರೆಗೂ ನಕ್ಷತ್ರಗಳೇ ಕಾಣುತ್ತಿದ್ದ ಸಾಯಿಗೆ ಈಗ ಇಡೀ Universe ಕಂಡಂತಾಗಿ ಅಲ್ಲೆ ದೊಪ್ಪನೆ ಕುಸಿದು ಬಿದ್ದ "ನಾಯಿಯಾದ ಸಾಯಿ"!!!!

Tuesday, October 9, 2007